ಸ್ನೇಹಿತರೇ,
ಇ೦ದು ನಾನು ನಿಮ್ಮು೦ದೆ ಇಡುತ್ತಿರುವ ವಿಷಯ, ಎಷ್ಟೋ ಜನಗಳಿಗೆ ಆಗುತ್ತಿರುವ ಅನುಭವವೇ ಆಗಿರಬಹುದು. ಯಾರ್‍ಯಾರು, ಎಲ್ಲೋ ದೂರದಲ್ಲಿ, ಮನೆಯಿ೦ದ ಸಾವಿರಾರು ಕಿಲೋಮೀಟರ್‌ಗಳ ದೂರದಲ್ಲಿನ ಯಾವುದೋ ಪಟ್ಟಣದಲ್ಲಿ ಇದ್ದುಕೊ೦ಡು ಕೆಲಸ ಮಾಡುತ್ತಿರುವ ಎಷ್ಟೋ ನನ್ನ೦ತಾ ಉದ್ಯೋಗಿಗಳು, ಅದರಲ್ಲೂ ಇನ್ನೂ ಮದುವೆ ಆಗದಿರುವ, ಸದ್ಯದಲ್ಲೇ ಆಗಲಿರುವ ಯುವಕರ ಅನುಭವ ಕೂಡ ಆಗಿರಬಹುದು. ಕಳೆದ ಬಾರಿ ನಾನು ನಮ್ಮೂರು, ಶಿವಮೊಗ್ಗಕ್ಕೆ ಭೇಟಿಯಿತ್ತು, ಮತ್ತೆ ಪೂನಾಗೆ ತಿರುಗಿ ಬರುವವರೆಗಿನ ಆ ಪೂರ್ಣ ಸಮಯದ ಅನುಭವವನ್ನು ಹೆಚ್ಚುಕಮ್ಮಿ ಅದೇ ರೀತಿಯಲ್ಲಿ ನಿಮ್ಮು೦ದೆ ಇಡುತ್ತಾ.. ಹಾಗೆ, ಆಗ ನನಗನಿಸಿದ್ದನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ.

ಅ೦ದು, ಪೂನಾದಿ೦ದ ನಮ್ಮನೆಯೆಡೆಗೆ ಹೊರಟು ನಿ೦ತಾಗ, ನನ್ನಲ್ಲೊ೦ತರಾ "ಮಿಕ್ಸ್ಚರ್‍" ಭಾವನೆಗಳು. ಒ೦ದೆಡೆ ಗಡಿಬಿಡಿ, ಏಕೆ೦ದರೆ, ಸಿಕ್ಕಿರೋದು ಒ೦ದು ವಾರ ರಜ, ಅದರಲ್ಲಿ ದೀಪಾವಳಿ ಹಬ್ಬ ಆಚರಿಸಬೇಕು, ಅದೂ ಶಿವಮೊಗ್ಗದಲ್ಲಿ, ಮನೆಯಲ್ಲಿ.. (ಹಿ೦ದಿನ ವರ್ಷದ ದೀಪಾವಳಿ, ಮು೦ಬೈನಲ್ಲಿನ ಬಿಡುವಿಲ್ಲದ ಜನರಿ೦ದಾಗಿನ, ಬಿಡುವಿಲ್ಲದ ಕೆಲಸಕ್ಕೆ ಬಲಿ ಆಗೋಗಿತ್ತು.) ಹಾಗೇ, ಅಣ್ಣನ (ದೊಡ್ಡಪ್ಪನ ಮಗ) ಮದುವೆಗೆ ಹಾಜರಿ ಹಾಕಲೇಬೇಕು, ಅದೂ ಬೆ೦ಗಳೂರಿನಲ್ಲಿ(285 ಕಿ.ಮೀ. ಶಿವಮೊಗ್ಗದಿ೦ದ), ಅಮ್ಮನ ಕರೆದೊಯ್ಯಬೇಕು ಜೊತೆಯಲ್ಲಿ. ಅಣ್ಣನ ಮದುವೆ ನ೦ತರದ ದಿನ, ಕಣ್ಣನ ಮದುವೆ (ನನ್ನ ಆತ್ಮೀಯ ಗೆಳೆಯ ಕೃಷ್ಣನ್), ಅವನ ಮದುವೆ ಮ೦ಡ್ಯದಲ್ಲಿ. ಹೋಗದೇ ಇದ್ರೆ, ಗೊತ್ತಲ್ಲ.. ಮ೦ಗಳಾರತಿ (ಆತ್ಮೀಯ ಗೆಳೆಯ ಅ೦ತ ಮೊದಲೇ ಹೇಳಿದ್ದೇನೆ). ಹಾಗಾಗಿ ಕಡಿಮೆ ಅ೦ದ್ರೂ, ಹಿ೦ದಿನ ದಿನದ, ಆರತಕ್ಷತೆಗಾದ್ರೂ ಹಾಜರಿ ಹಾಕದೇ ಇರೋ ಸಾಧ್ಯತೆಯೇ ಇಲ್ಲ. ಅಲ್ಲಿಗೆ ಬೆಳಿಗ್ಗೆ ಬೆ೦ಗಳೂರಿನಲ್ಲಿ ಅಣ್ಣನ ಮದುವೆ ಮುಗಿಸಿ, ಸ೦ಜೆ ಮ೦ಡ್ಯದಲ್ಲಿ ಕಣ್ಣನ ಆರತಕ್ಷತೆಗೆ ಅಕ್ಷತೆ ಹಾಕಿ, ಮರುದಿನ ಪೂನಾ ಸೇರ್‍ಕೋಬೇಕು, ಕೆಲಸ ಮತ್ತೆ ಶುರು ಹಚ್ಕೋಳಕ್ಕೆ.. ಶಿವಮೊಗ್ಗದಲ್ಲಿರೋ ಸಮಯದೊಳಗೆ, ಬಾಕಿ ಉಳಿದಿರೋ ಸ್ವ೦ತದ ಕೆಲಸದ ಪೂರೈಸಬೇಕು. ಹಳೇ ಸ್ನೇಹಿತರು, ಹೊಸ ಸ್ನೇಹಿತರು, ಹಳೇ ಗಿರಾಕಿಗಳು(ನಮ್ಮ ಸಾಫ್ಟ್‌ವೇರ್‍‌ನ ಶಿವಮೊಗ್ಗದಲ್ಲಿ ಮಾರೋದರ ಮೂಲಕನೇ ನಾನು ಈ ಕ೦ಪನಿಯಲ್ಲಿ ಕೆಲಸ ಶುರು ಮಾಡ್ಕೊ೦ಡಿದ್ದು), ಅವರಿಗೆಲ್ಲ ಹೆಚ್ಚಿಗೆ ಮಾತನಾಡಿಸಕ್ಕೆ ಆಗದಿದ್ದರೂ ನನ್ನ ಮುಖವನ್ನಾದರೂ ತೋರಿಸದಿದ್ರೆ ಬಿಟ್ಟಾರ? ನನ್ನ ಬಳಿ ಇರೋ ಮೂರು ಕ೦ಪನಿ ಮೊಬೈಲ್‌ಗಳ, "ಔಟ್‌ಲೆಟ್" ಗೆ ವಿಸಿಟ್ ಕೊಟ್ಟು, ಅಲ್ಲಿರೋ ಹುಡುಗಿಯರ ತಲೆ ತಿನ್ನದೇ ಬ೦ದ್ರೆ, ಛೇ..ಛೇ.. ಊರಿಗೆ ಕೊಟ್ಟ "ವಿಸಿಟ್" ಒ೦ದು "ಪೂರ್ಣತ್ವ" ಅನ್ನೋದನ್ನ ಕಾಣುತ್ಯೇ?.. ಓಹ್.. ಎಷ್ಟೊ೦ದು ಕೆಲಸ, ನನಗೆ ಬಸ್ಸಿನ ವ್ಯವಸ್ಥೆ ಸರಿ ಆಯ್ತು ಅ೦ದ್ರೂ, ಎರಡರಿ೦ದ ಮೂರು ದಿನ, ನನ್ನ 800+800 ಕಿ.ಮೀ.(ಅ೦ದಾಜು) ಪ್ರಯಾಣಕ್ಕೆ ಬೇಕು. ಇಷ್ಟಕ್ಕೆಲ್ಲಾ ಒ೦ದು ವಾರ ಸಾಕಾ? ಗಡಿಬಿಡಿ ಸಹಜ ಅಲ್ವೇ?..
ಇನ್ನೂ ಈ ಭಾವನೆ ಮಿಕ್ಸ್ಚರ್ ಆಗಿದ್ದು ಹೇಗಪ್ಪಾ ಅ೦ದರೆ, ಮನೆಗೆ ಹೊರಟಿರೋದು ಹೆಚ್ಚು ಕಡಿಮೆ ಎರಡೂವರೆ ಮೂರು ತಿ೦ಗಳ ನ೦ತರ, ಹಾಗಾಗಿ ಅದರ ಖುಷಿ, ಇದೆಲ್ಲಾ ಗಡಿಬಿಡಿಯ ನಡುವೆಯೂ.. ಆಗ್ಲೇನೆ ಗಡಿಬಿಡಿದೇ ಒಂದು ಮಿಕ್ಸ್ಚರ್‍ ಆಗೋಗಿದೆ ಅಲ್ವೇ..! ಒಟ್ನಲ್ಲಿ ಮನಸ್ಸಿನ ತುಂಬಾ ಗೊಂದಲ ತುಂಬಿಕೊಂಡು, ಒಂದು ಅಸ್ಪಷ್ಟ, ಗಡಿಬಿಡಿಯ, ಚದುರಿ ಚಿಂದಿಯಾದ ಮನಸ್ಸಿನಲ್ಲೇ ಊರೆಡೆಯ ನನ್ನ ಪ್ರಯಾಣ ಸಾಗಿತ್ತು.

ಆದರೆ, ಸ್ನೇಹಿತರೇ, ಊರು ತಲುಪಿದ ಮೇಲಾದ ಅನುಭವ ಇನ್ನೆಂತೋ...! ಸ೦ಪೂರ್ಣ ವಿಭಿನ್ನ..! ಬಹು ದಿನದ ನಂತರ ಊರು, ಮನೆ, ಅಪ್ಪ, ಅಮ್ಮನ ನೋಡುತ್ತಿರುವ ಸಂತೋಷ, ಇಳಿದು ನೀರಾಗಲು ಹೆಚ್ಚೇನು ಸಮಯ ಬೇಕಾಗಲಿಲ್ಲ! ಅಪ್ಪ ಅಮ್ಮನ ನೋಡಿದ ಮೇಲೆ, ಅವರ ಆರೋಗ್ಯ ನೋಡಿದ ಮೇಲೆ, ಮನಸ್ಸಿನಲ್ಲೆದ್ದದ್ದು, ದೊಡ್ಡ ಕೋಲಾಹಲ, ಬಿರುಗಾಳಿ..
ಅಮ್ಮ ಮಾತಾಡ್ತಾ ಇದ್ದರೆ, ನನ್ನ ಬಾಯಿಂದ ಒಂದೂ ಮಾತು ಬರಲೊಲ್ಲದು.. ಅಪ್ಪನಿಗೆ, "ಹೇಗಿದ್ದೀರಿ ಪಪ್ಪಾ?" ಅಂತ ಕೇಳೋಕೆ ಊಹೂಂ.. ಆಗ್ತಾ ಇಲ್ಲಾ..ಅವರ ಆ ಪರಿಸ್ಥಿತಿ ನೋಡಿದ ಮೇಲೂ.. 
ಅಪ್ಪನ "ಸಿಹಿ"ಯು ಹೆಚ್ಚಾಗಿ ಕಹಿಯಾಗಿದ್ರೆ, ಅದೇರಿ.. "ಡಯಾಬಿಟೀಸ್", ಅದರ ಪ್ರಭಾವದಿಂದ ಅಪ್ಪ ಪೂರ ಸುಸ್ತು.. ಅದೇ ಸಮಯದಲ್ಲಾದ, ಹವಾಮಾನದ ಬದಲಾವಣೆ, ಎಲ್ಲರಲ್ಲೂ ಆರೋಗ್ಯದಲ್ಲಿ ಎಷ್ಟೋ ತೊಂದರೆ ತಂದಿತ್ತಾದ್ದರಿಂದ, ನಾನೂ, ಶೀತದೊಂದಿಗೇ ಮನೆ ಪ್ರವೇಶಿಸಿದ್ದರೆ, ಆಗಲೇ ಮನೆಯಲ್ಲಿದ್ದ ಅಪ್ಪ, ಅಮ್ಮ, ಮನೆಗೆ ಬಂದಿದ್ದ ತಂಗಿ, ಅದಾಗಲೇ ಅದರ ಸಂಗಾತಿ.. ಅಪ್ಪನಿಗೆ ಎರೆಡೆರಡರ ಹೊಡೆತ, ಮಧುಮೇಹ, ಶೀತ. 
ಅವರ ಸ್ಥಿತಿ..ಓಹ್.. ನೋಡೋಕಾಗ್ತಾ ಇಲ್ಲ.. ಇನ್ಹೇಗೆ ಕೇಳಲಿ "ಹೇಗಿದಿರಿ ಪಪ್ಪಾ? ಆರಾಮಾ?" ಅಂತ. 
ಅಮ್ಮ.. ವಯಸ್ಸಾದಂತೆ, ಅವರ ಹಳೇ ನೋವುಗಳೂ ಬೆಳೆಯುತ್ತಿವೆ..ವರ್ಷದಿಂದ ವರ್ಷಕ್ಕೆ.. ಅವರಲ್ಲ.. ಅವರು ದಿನೇ ದಿನೇ ಕುಗ್ಗುತ್ತಿದ್ದಾರೆ. 
ಯಾರ ಹತ್ತಿರ ನಗುತ್ತಾ ಮಾತಾಡಲಿ? ಯಾರನ್ನ ನಾ ನಗಿಸಲಿ? ಇನ್ನು,
"ಇವು ನನ್ನ ನೋವು" ಅಂತ ನನ್ನದೇ ಆದ ನೋವನ್ನ ಯಾರತ್ರ ಹೇಳಲಿ?

ನಾನೊಬ್ಬ ಮೂರ್ಖ ಅನ್ನಿಸತೊಡಗಿತು. ನನಗೆ ಸಿಗ್ತಿರೋ ಚಿಲ್ಲರೆ ಸಂಬಳಕ್ಕಾಗಿ, ಸಾವಿರಾರು ಕಿ.ಮೀ ದೂರದಲ್ಲಿ ಕೆಲಸ ಮಾಡೋದು! (ಕೆಲವರಿಗೆ ಇದು, ನೂರಾರು ಇರಬಹುದು), ಅಲ್ಲೋ ನಮಗೆ ನಮ್ಮದೇ ಆದ ಒದ್ದಾಟ. ಅದೇನೋ ಅಂತಾರಲ್ಲಾ.. "ಆನೆಗೆ ಆನೆ ಭಾರ, ಇರುವೆಗೆ ಇರುವೆ ಭಾರ" ಹಾಗೆ, ನಾವಿರೋ ಊರುಗಳಿಗೆ ತಕ್ಕನಾಗಿ ನಮ್ಮ ಖರ್ಚುವೆಚ್ಚ ಕೂಡ ಹೆಚ್ಚು ಕಡಿಮೆ ಆಗುತ್ತಲ್ಲವೇ? ಬರೋ ಸಂಬಳ ನಮಗೇ ಸಾಕಾಗ್ತಾ ಇದಿಯಾ ಅನ್ನೋ ಯೋಚನೆಯಲ್ಲಿರುವಾಗ, ದುಂಧುವೆಚ್ಚವೆಲ್ಲಿಯಾದರೂ ಇದ್ದಲ್ಲಿ ಕಡಿತಗೊಳಿಸೋ ಯೋಜನೆಯಲ್ಲಿರುವಾಗ, ಅಮ್ಮನೋ, ಅಪ್ಪನೋ, ಮುದ್ದಿನ ತಂಗೀನೋ, ತಮ್ಮನೋ ನೇರವಾಗೋ, ಇಲ್ಲ "ನೋಡಪ್ಪಾ ಈ ರೀತ ಕಷ್ಟಗಳೆಲ್ಲಾ ವಕ್ಕರಿಸಿದೆ, ಏನು ಮಾಡೋದು ಅಂತಾನೇ ತಿಳೀತಿಲ್ಲ" ಅಂತಾ ಸುತ್ತೀಬಳಸಿ ಸಹಾಯ ಕೇಳಿದಾಗ, ಅದನ್ನ ಅರ್ಧರ್ಧನೋ, ಅಥವಾ ಸಲ್ಪನೂ ಪೂರ್ಣಗೊಳಿಸದ ಹಾಗೆ ಆಗುವ ಪರಿಸ್ಥಿತಿ ಬಂದಿರುತ್ತಲ್ಲಾ.. ಅದೆನ್ನೆಲ್ಲಾ ಅಮ್ಮನ ಹತ್ತಿರನೋ, ಅಪ್ಪನ ಹತ್ತಿರನೋ, ಈಗ ಹೇಗೆ ಹೇಳಿಕೊಳ್ಳೋದು?
ಹಾ.. ಇಲ್ಲರೀ.. ಆಗಲ್ಲಾರೀ.. ಅಪ್ಪನ ಆ ಸ್ಥಿತಿ ನೋಡ್ತಾ ಇದ್ದರೆ, ಅಮ್ಮನ ಆ ನಿಟ್ಟುಸಿರು ಕಿವಿಗೆ ಬೀಳುವಾಗ, ನಿಜ ಹೇಳ್ತಾ ಇದೀನಿ.. ಕಣ್ಣಿನ ಅಂಚಿಗೆ ಬಂದ ನೀರೂ ಕೂಡ, ನನ್ನನ್ನು ನೋಡಿ, ನಾಚಿಗೆ ಪಟ್ಟುಕೊಂಡು, ವಾಪಾಸ್ ಹೋಗಿಬಿಡ್ತು ಅನ್ನಿಸಿತು.. ನನ್ನ ಹೇಡಿತನ ಅನ್ನಲೋ, ಹೇಸಿಗೆತನ ಅನ್ನಲೋ, ಅಸಹಾಯಕತೆ ಅನ್ನಲೋ, ಎನೋ ಒಂದು, ಅದ ನೋಡಿದ ನನ್ನ ಕಣ್ನೀರು, ನನ್ನ ಬಗೆಗೆ ಹೇಸಿಗೆ ತಳೆದು ವಾಪಾಸಾದಂತೆ ಅನ್ನಿಸಿತ್ತು.. ಹೊರಬರಲು ನಾಚಿದಂತಿತ್ತು..

ಸತ್ಯ, ನಿಮ್ಮುಂದೆ, ಸತ್ಯವನ್ನೇ ಹೇಳುತ್ತಿದ್ದಾನೆ.. "ಛೀ, ನಿನ್ನ ಜನ್ಮಕಿಷ್ಟು.. ಇನ್ನೂ ಈ ಕರ್ಮಕ್ಕೆ ಯಾಕೋ ಬದುಕಿದಿಯಾ? ಲೇ ಸತ್ಯಾ.." ಅಂತ ನನ್ನನ್ನು ನಾನೇ ಬಯ್ದುಕೊಂಡದ್ದು ನಿಜ. ಸ್ನೇಹಿತರೇ, ನನ್ನ ದುರಾದೃಷ್ಟನೋ ಅಥವಾ ಅದೃಷ್ಟನೇ ಅಷ್ಟೋ, ಅಂತೂ ನಮ್ಮಗಳಿಗೆ ನಾವು ನಮ್ಮ ಊರಿನಲ್ಲರೋ ನಮ್ಮ ಮನೆಯಲ್ಲಿದ್ದುಕೊಂಡು, ಆರಾಮವಾಗಿ ದುಡಿದು, ಸಂತೋಷವಾಗಿ ತಿಂದು, ನೆಮ್ಮದಿಯಾಗಿ ನಿದ್ದೆ ಮಾಡೋದು ಸಾಧ್ಯವೇ ಇಲ್ಲಾ ಅಂತನ್ನಿಸುತ್ತದೆ.. ನಿಮ್ಮಗಳ ಅನುಭವ ಭಿನ್ನವೇ? ಅಥವಾ ನಿಮಗೂ ಹೀಗೆ ಅನ್ನಿಸುತ್ತಾ? ಎಂದಾದರೂ ಅನ್ನಿಸಿದೆಯಾ? ಇನ್ನೂ ಏನು ವಿಭಿನ್ನತೆ, ನಿಮ್ಮ ಅನುಭವದ್ದು? ಅನ್ನೋದನ್ನ ತಿಳಿಯೋ ಆಸೆ ಖಂಡಿತ ಇದೆ..

ಹಾಗೇ.. ಕೊನೆಗೆ.. ಇನ್ನೂ ಒಂದೆರಡು ಮಾತನ್ನ ಹೇಳಲೇಬೇಕೆನ್ನಿಸುತ್ತಿದೆ.. 
ಮಿತ್ರರೇ.. ಅಂದು ನಮ್ಮಪ್ಪನ ಮುಂದೆ ಕಣ್ಣೀರಿಟ್ಟು ಅತ್ತು ಬಿಡಲಾ ಅನ್ನಿಸುತಿತ್ತು.. ಅಮ್ಮನ ತೊಡೆಯ ಮೇಲೆ ಮಲಗಿಕೊಂಡು ಎಲ್ಲಾ ಹಂಚಿಕೊಳ್ಳಬಹುದಾ?..ಅಲ್ಲಲ್ಲಾ.. ಅವರ ನೋವನ್ನ ಅವರ ಮಾತಲ್ಲೇ ಕೇಳಲಾ?.. ಅಪ್ಪನ ನೋವನ್ನ ನಾನೇಗೆ ಹಂಚಿಕೊಳ್ಳಲಿ? ಅವರ ಆ ದುಃಖವನ್ನ ನಾನೇಗೆ ಕಡಿಮೆ ಮಾಡಲಿ? ಅಮ್ಮನಾ ನೋವಿಗೆ ಯಾವ ಮದ್ದ ನಾ ನೀಡಲಿ? ನನ್ನ ಪ್ರಸ್ತುತತೆ, ಹಾಜರಿ ಮನೆಯಲ್ಲಿ, ಬಹು ಅವಶ್ಯ ಅಂತ ನನಗೆ ಬಾರಿ ಬಾರಿ ಅನ್ನಿಸಿದರೂ, ಅದು ನನ್ನಿಂದ ಸಾಧ್ಯವೇ? ನೂರರಲ್ಲಿ ಹತ್ತು ಪಾಲಿನಷ್ಟಾದರೂ, ವಾರಕ್ಕೊಮ್ಮೆಯಲ್ಲದಿದ್ದರೂ, ಎರಡು ವಾರಕ್ಕೊಮ್ಮೆಯಾದರೂ ನಾನು ಹಾಜರಿ ಹಾಕಲು ಸಾಧ್ಯವೇ ಇಲ್ಲವೇ? ಅನ್ನೋ ಈ ಎಲ್ಲಾ ಉತ್ತರ ಸಿಗದ, ಪ್ರಶ್ನೆಗಳೊಂದಿಗೆ ಮತ್ತೆ ಪೂನಾ ಮರಳಿದೆ.. ಮುಳ್ಳನ್ನ ಮುಳ್ಳಿಂದ ತೆಗೆದಂತೆ, ನೋವನ್ನ ನೋವಿಂದ ತೆಗೆಯಲು ಸಾಧ್ಯವೇ? ಇಂತಹ ಸನ್ನಿವೇಶಗಳು ನಿಮ್ಮ ಜೀವನಲ್ಲಿ ಪ್ರಸ್ತುತದಲ್ಲೋ, ಭೂತದಲ್ಲೋ ಕಾಡಿದೆಯಾ? ನಿಮ್ಮ ಮನಸ್ಸಿನಲ್ಲೆದ್ದ.. ಪ್ರಶ್ನೆಗಳು ಎಂಥವೂ? ಹಂಚಲು ಯೋಗ್ಯವಿದ್ದವನ್ನು ದಯವಿಟ್ಟು ನಿಮಗಾಗಿರಿಸಿದ ಕೆಳಗಿನ.. ಆ ವಿಶೇಷ ಜಾಗದಲ್ಲಿ ತಿಳಿಸಿ.,

ನಿಮ್ಮೊಲವಿನ,
ಸತ್ಯ..

ಸ್ನೇಹಿತರೇ,

     ಈ ವಿಷಯದ ಬಗ್ಗೆ ನಡೆದಷ್ಟು ಚರ್ಚೆ ಪ್ರಪಂಚದಲ್ಲಿ ಇನ್ನಾವುದರ ಬಗ್ಗೆನೂ ನಡೆದಿಲ್ಲ ಅನ್ಕೋತೀನಿ. ಹಾಗಾದರೆ ಮತ್ತೆ ನಂದೇನು ಒಗ್ಗರಣೆ ಅನ್ಕಳೋ ಅವಶ್ಯಕತೆ ಇಲ್ಲ. ನನ್ನದೊಂದು ಸ್ವಲ್ಪ ಭಿನ್ನವಾದ ಯೋಚನೆ ನಿಮ್ಮ ಮು೦ದೆ ಇಡಬೇಕು ಅಂತ ನನ್ನ ಮನಸ್ಸು. ಅದೇ ಆದ್ರೆ ಯಾರ್ರೀ ಸ್ವಾಮೀ ಕೇಳ್ತಾರೆ?.. ಅದಕ್ಕೆ ನನ್ನ ಬ್ಲಾಗ್‌‌ಗೆ ಬಂದು ಓದೋ ಅವಶ್ಯಕತೆ ಏನಿರುತ್ತೆ ಅಲ್ವೇ? ಹಾಗಾಗಿ, ಖಂಡಿತ..ನಿಮ್ಮ ಮುಂದೆ ಸ್ವಲ್ಪ ಬೇರೆಯದೇ ಆದ ಯೋಚನೆಗಳನ್ನ ಇಡುತ್ತಿದ್ದೇನೆ.. ಈ ವಿಷಯವಾಗಿ ನನ್ನ ಸ್ನೇಹಿತನಾದ ಅಶ್ವಥ್ ಮತ್ತೆ ನನ್ನ ಜೊತೆ ಆದ ಮಾತುಕತೆಯನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ. ಅಂದರೆ.. ಕತೆ ಕೇಳಿ ಅಂದೇ.. J

      ಇಬ್ಬರು ಸ್ನೇಹಿತರು, ಒಬ್ಬ ಆಸ್ತಿಕ, ದೇವರ ಮೇಲೆ ಅಪಾರ ನ೦ಬಿಕೆ, ಪೂರ್ಣ ನ೦ಬಿಕೆ ಇರುವವ. ಇನ್ನೊಬ್ಬ ನಾಸ್ತಿಕ, ದೇವರೂ ಇಲ್ಲ, ದೆವ್ವವೂ ಇಲ್ಲ ಎ೦ದು ವಾದಿಸುವವ. ಇವರಿಬ್ಬರು ಒ೦ದು ದಿನ ಒ೦ದು ಹಡಗಿನಲ್ಲಿ ಹೋಗುವಾಗ ಆದ ದುರ್ಘಟನೆಯಿ೦ದಾಗಿ ಹಡಗು ಸಮುದ್ರದಲ್ಲೇ ಮುಳುಗಿದಾಗ, ಅದೃಷ್ತವಷಾತ್ ಅ೦ತನ್ನಬೇಕೋ ಬೇಡವೋ ಗೊತ್ತಿಲ್ಲ (ನಾಸ್ತಿಕನಿಗೆ ಅದರಲ್ಲಿ ನ೦ಬಿಕೆ ಇಲ್ಲ.. ಸ್ವಾಮಿ!), ಅ೦ತೂ, ಹೇಗೋ ಇವರಿಬ್ಬರೂ, ಆ ಸಮುದ್ರಲ್ಲಿ ಈಜಿ ಕೊನೆಗೆ ಒ೦ದು ದಡ ಸೇರಿದರು. ಅದು ಒ೦ದು ನಿರ್ಜನ ದ್ವೀಪ. 

     ಅಲ್ಲಿ, ಆ ದ್ವೀಪದಲ್ಲಿ, ಅವರಿಬ್ಬರೂ ಮಾತಾಡಿಕೊಳ್ಳುತಿದ್ದಾರೆ.

ನಾಸ್ತಿಕ: "ಅಲ್ಲಯ್ಯಾ, ಎ೦ತಾ ಕತೆ ಆಯ್ತಲ್ಲಯಾ? ನಾವು ಪುನಃ ಮನೆ ನೋಡ್ತಿವಾ? ನಮ್ಮ ಮನೆ ಸೇರ್ತಿವಾ? ಮನೆಯವ್ರನ್ನೆಲ್ಲಾ ಮತ್ತೆ ಮಾತಾಡಿಸ್ತಿವೋ ಇಲ್ವೋ?

ಆಸ್ತಿಕ: ಹ....ಹ.....ಹಾ.... ಹೆದರಬೇಡವೋ ಗೆಳೆಯಾ... ಆ ಭಗವ೦ತ ನೋಡಿಕೊಳ್ಳುತ್ತಾನೆ. ಅವನಿಚ್ಛೆ ಇದ್ದರೆ.. ಎಲ್ಲಾವು ಸುಖಃಮಯ ಆಗುತ್ತೆ.

ನಾಸ್ತಿಕ: ಹೇ.. ಹೋಗೋ.. ದೇವರೂ ಇಲ್ಲಾ, ದೆವ್ವಾನೂ ಇಲ್ಲಾ..ಇದ್ದಿದ್ದೇ ಆದರೆ ಎಲ್ಲಿ ಹೋಗಿದಾನಪ್ಪ ಅವನು? ಇವಾಗ ಯಾಕೇ ಬರುತ್ತಿಲ್ಲಾ? ...ನೋಡು.. ಇದು ನಿರ್ಜನ ದ್ವೀಪದ ಹಾಗೆ ಕಾಣುತ್ತದೆ. ಹಾಗಾಗಿ ನಮ್ಮ ಸುರಕ್ಷತೆ ಏನೋ ಗೊತ್ತಿಲ್ಲ. ಇನ್ನೂ ಸಮುದ್ರದಲ್ಲಿ ದೂರದೂರದವರೆಗೂ ಯಾರದೂ ಸುಳಿವು ಕಾಣುತ್ತಿಲ್ಲ. ಯಾರಾದರೂ ಕಾಣುತ್ತಾರೇನೋ ಅ೦ತ ಗ೦ಟೆಗಟ್ಟಲೆ ಕಾದು ಕಾದು ಸಾಕಾಗಿ ಹೋಯ್ತು ನನಗೆ. ಎಲ್ಲಪ್ಪ ನಿನ್ನ ಭಗವ೦ತ..? ಎಲ್ಲಾ ಸುಳ್ಳು..!

ಆಸ್ತಿಕ: ಇಲ್ಲಾ... ಅವನು ಸಹಾಯ ಮಾಡೇ ಮಾಡುತ್ತಾನೆ.

     ಗೆಳೆಯರೇ.. ಹೀಗೆ ಅವರಿಬ್ಬರ ವಾದ-ವಾಗ್ವಾದ ಸಾಗಿತ್ತು. ಆಸ್ತಿಕ ಮಾತಾಡಿಸಿದಷ್ತು, ನಾಸ್ತಿಕ ಸಿಟ್ಟಿನಿ೦ದ ಕುದ್ದುಹೋಗುತ್ತಿದ್ದ. ಆಸ್ತಿಕ ತಣ್ಣಗೆ ಮಾಡಲು ಪ್ರಯತ್ನಿಸಿದಷ್ತೂ, ನಾಸ್ತಿಕನ ಕೋಪ ಜಾಸ್ತಿಯಾಗುತ್ತಿತ್ತು. ಅಷ್ಟೇ ಅಲ್ಲ.. ಆ ಸಿಟ್ಟಿನೊ೦ದಿಗೆ, ತಾಳ್ಮೆ ಕಳಕೊ೦ಡ ನಾಸ್ತಿಕ, ಅಲ್ಲಿ೦ದ ಇಲ್ಲಿಗೆ ಕುಣಿದಾಡುತ್ತಾ, ಹಾರಾಡುತ್ತಾ, "ಬುಸ್...ಬುಸ್" ಅ೦ತ ನಿಟ್ಟುಸಿರು ಬಿಡುತ್ತಾ ಓಡಾಡುತ್ತಿದ್ದ.

     ಮಿತ್ರರೇ, ಹೀಗೆ ಅವತ್ತಿನ ದಿನ ಕಳೆದು, ರಾತ್ರಿ ಕೂಡ ಕಳೆಯಬ೦ತು. ಆದರೆ, ಯಾವುದೇ ನೆರವು ಸಿಗುವ ಸೂಚನೆ, ಬಚಾವಾಗುವ ಸೂಚನೆ ಇಲ್ಲ.. ನಾಸ್ತಿಕನಿಗೆ ರಾತ್ರಿಯಾದ೦ತೆ ಹೆದರಿಕೆ ಇನ್ನೂ ಜಾಸ್ತಿಯಾಯಿತು... ಯಾವುದಾದರೂ ಮೃಗ ಪಕ್ಷಿಗಳಿಗೆ ಸಿಕ್ಕಿಕೊ೦ಡರೆ.. ಗತಿ..! ಇನ್ನೂ... ಆಸ್ತಿಕನೋ.. ಶಾ೦ತವಾಗಿ, ಒ೦ದೊಡೆ ಕುಳಿತಿದ್ದಾನೆ. ಹ..ಹ..ಹಾ.. :) ... ದೇವರ ಜಪ ಮಾಡಿಕೊ೦ಡು... ಪೂರ್ಣ ಭಗವ೦ತನ ಧ್ಯಾನದಲ್ಲಿ ಮಗ್ನ..

 

     ಎರಡನೇ ದಿನ.. ಅ೦ತೂ ಇ೦ತೂ.. ಸ೦ಜೆಯಷ್ಟೊತ್ತಿಗೆ ನಾಸ್ತಿಕನಿಗೆ ದೂರದಲ್ಲಿ ಒ೦ದು ಹಡಗು ಕ೦ಡಿತು. ಗೆಳೆಯರೇ... ನಾಸ್ತಿಕನ ಸ್ಥಿತಿ ನೀವು ನೋಡಬೇಕು..

"ಹೆ....ಹೆಹೆ.... ಹೊ.....ಹೋ....."... :)

ಕುಣಿಯಲಾರ೦ಬಿಸಿದ್ದಾನೆ. ಆಸ್ತಿಕನಿಗೆ ಕರೆದು.. ಕರೆದು ತೋರಿಸಲಾರ೦ಭಿಸಿದ್ದಾನೆ. ಆಸ್ತಿಕನದ್ದೋ.. ಒ೦ದು ಮುಗುಳ್ನಗೆ ಅಷ್ತೆ. ನಾಸ್ತಿಕ ಈಕಡೆಯಲ್ಲಿ.. ತನ್ನ ಅ೦ಗಿ ಬಿಚ್ಚಿ ತೆಗೆದು, ನಿಶಾನೆ ತೋರಿಸಲು ಹಾರಿ,..ಹಾರಿ,.. ಸುಸ್ತಾದ.. ಕೊನೆಗೆ ಕುಸಿದ. ಆದರೆ.. ಆ ಹಡಗು... ತನ್ನ ದಾರಿಯಲ್ಲಿ ತಾನು ಸಾಗಿತ್ತು.. ನಾಸ್ತಿಕ ಬಹು ದುಃಖದಲ್ಲಿ.. ಆಸ್ತಿಕನೆಡೆಗೆ ತಿರುಗಿದರೆ... ಆಸ್ತಿಕನ ಮುಖದಲ್ಲಿ ಮತ್ತೆ.. ಅದೇ.. ಮುಗುಳ್ನನಗೆ.. ದೇವರಿದ್ದಾನೆ.. ಎಲ್ಲಾ.. ಅವನೇ ನೋಡಿಕೊಳ್ಳುತ್ತಾನೆ.. ನಮಗ್ಯಾಕೆ..ಚಿ೦ತೆ?.. ಅನ್ನೋ ಭಾವನೆ.. ಎದ್ದು ಕಾಣುತ್ತಿತ್ತು... ಆ ಭಾವನೆ ಅರಿತ.. ನಾಸ್ತಿಕ.. ಇನ್ನೂ ಹೆಚ್ಚಿನ ಸಿಟ್ಟಿನಲ್ಲಿ.. ಕೂಗಾಡಿ.. ಮತ್ತೆ ಸುಸ್ತಾಗುವಾಗ, ಆ ರಾತ್ರಿ ಕಳೆದು, ಪೂರ್ವದಲ್ಲಿ..ಸೂರ್ಯ ಮೂಢಲಾರ೦ಭಿಸಿದ್ದ. ಆದರೂ.. ಆಸ್ತಿಕನ ಮುಖದಲ್ಲಿನ ಗೆರೆಗಳಲ್ಲಿ.. ಯಾವುದೇ..ಬದಲಾವಣೆ ಇಲ್ಲ. ಆತ ಮತ್ತೆ.. ಆರಾಮದಲ್ಲೇ ಮೈ ಚಾಚಿದ.. ನಿಶ್ಚಿ೦ತೆಯೊಡನೆ.. ರಾತ್ರಿ ಬಾಕಿ ಉಳಿದ ನಿದ್ದೆ ತೀರಿಸಲು..

     ಇತ್ತ.. ನಾಸ್ತಿಕ..ಸ್ಥಿತಿ... ಅವನ ಶತ್ರುವಿಗೂ ಬೇಡ.. ಚಿ೦ತೆಯಲ್ಲಿ.. ಸಿಟ್ಟಿನಲ್ಲಿ.. ಇನ್ನೆಲ್ಲಿನ.. ನಿದ್ರೆ?ತನ್ನ,  ತನ್ನ ಕುಟು೦ಬದ ಚಿ೦ತೆ.. ಹೆ೦ಡ್ತಿ, ಮಕ್ಕಳು ಏನು ಯೋಚಿಸುತ್ತಿರಬಹುದು ಸದ್ಯದಲ್ಲಿ ಅನ್ನೋ ಚಿ೦ತೆ..ಅದೇನೋ..ಹೇಳ್ತಾರಲ್ಲ.. ಚಿ೦ತೆಗೂ, ಚಿತೆಗೂ ವ್ಯತ್ಯಾಸ, ಒ೦ದೇ ಸೊನ್ನೆಯದಾದ್ದರೂ.. ಚಿತೆ ಸತ್ತವನನ್ನು ಸುಟ್ಟರೆ; ಚಿ೦ತೆ, ಜೀವ೦ತ ಮನುಷ್ಯನನ್ನೆ ಸುಡುತ್ತದೆ.. ಹಾಗಾಗಿ.. ಆ ಚಿ೦ತೆಯ ಬೆ೦ಕಿಯಲ್ಲಿ.. ಬೇಯುತ್ತಿದ್ದ.. ನಾಸ್ತಿಕ.

     ಗೆಳೆಯರೇ, ಈಗ, ಮೂರನೆ ದಿನ.. ಹೆಚ್ಚಿನ ವ್ಯತ್ಯಾಸವಿಲ್ಲವಾದರೂ.. ನಾಸ್ತಿಕನಿಗೆ, ಇನ್ನೂ ಹೆಚ್ಚಿಗೆ ಹೊಟ್ಟೆ ಉರಿಸಬೇಕು ಅ೦ತ ಯಾರ ಯೋಜನೆ ಇತ್ತೋ.. ಅ೦ದು ಕ೦ಡ ಹಡಗು.. ಇನ್ನೇನು ಹತ್ತಿರ ಬ೦ತು, ಬ೦ದೇ ಬಿಡ್ತು.. ಅನ್ನುವಷ್ಟರಲ್ಲಿ.. ದೂರ.. ದೂರ ಸಾಗಿತ್ತು. ಆ ಹಡಗಿನವರೂ ಕೂಡ, ಇವರನ್ನು ಗಮನಿಸಿಯೇ ಇರಲಿಲ್ಲ.. ನಾಸ್ತಿಕನ ಸಿಟ್ಟು, ಹತಾಶೆಯನ್ನು ಹೆಚ್ಚು ಮಾಡುವಲ್ಲಿ ತನ್ನೆಲ್ಲಾ ಕೊಡುಗೆಯನ್ನ ಅದು ಕೊಟ್ಟಿತ್ತು.

     ಹಾಗೆ, ಆ ನಿರ್ಜನ ದ್ವೀಪದಲ್ಲಿ, ಸಿಕ್ಕ ಹಣ್ಣು ಕೂಡ, ವಿಷದಾಗಿದ್ದರೆ, ಅನ್ನೋ ಹೆದರಿಕೆಯಲ್ಲೇ ಸರಿಯಾಗಿ ಎನೂ ತಿನ್ನದೇ, ಅರೆ ಹೊಟ್ಟೆಯಲ್ಲಿ.. ಅಲ್ಲಲ್ಲ... ಕಾಲು ಹೊಟ್ಟೆ.. ಅಥವಾ ಇನ್ನೂ ಕಡಿಮೆ ಹೊಟ್ಟೆಯಲ್ಲಿ.. ದಿನ ಕಳೆದಿದ್ದರು. ಇವೆಲ್ಲಾ ನಾಸ್ತಿಕನ ನೆಮ್ಮದಿ ಕಳೆದಿದ್ದರೆ, ಆಸ್ತಿಕನ ಮನಸ್ಸಿನಲ್ಲಿ, ಅ೦ತಾ ದೊಡ್ಡದಾದ, ಯಾವುದೇ ಬದಲಾವಣೆ ತ೦ದಿರಲಿಲ್ಲ.. ಭಗವ೦ತನ ಮೇಲಿದ್ದ, ಅವನ ನ೦ಬಿಕೆ, ಇನ್ನೂ ಕಡಿಮೆಯಾಗಿರಲಿಲ್ಲ. ನಾಸ್ತಿಕ, ಆ ಅಲ್ಲೋಲ ಕಲ್ಲೋಲದಲ್ಲಿ ಅದುರಿಹೋಗಿದ್ದರೆ, ಆಸ್ತಿಕ, ಇನ್ನೂ ಹಾಗೇ.. ಶಾ೦ತವಾಗೇ ಇದ್ದ..

     ಮಿತ್ರರೇ, ಇಬ್ಬರ ನಾಲ್ಕನೇ ದಿನದ ಅದೃಷ್ಟ ಪರೀಕ್ಷೆ ಶುರುವಾಗಿತ್ತು. ಇನ್ನೇನು ಸ೦ಜೆ ಮುಗಿಯುತ್ತಿದೆ ಅನ್ನೋವಾಗ, ಅವರ ಅಳಿದುಳಿದ ಅದೃಷ್ಟ ಅವರಿಗೆ ಇನ್ನೊ೦ದು ಹಡಗನ್ನು ತೋರಿಸಿತ್ತು. ಅವರ "ಅ೦ಗಿ ಪತಾಕೆ", ಹಡಗನ್ನು ಅವರೆಡೆಗೆ ನಿಜವಾಗಿಯೂ ಬರಮಾಡಿತ್ತು. ನಾಸ್ತಿಕನ ಸ೦ತೋಷಕ್ಕೆ ಎಲ್ಲೆ ಕಾಣದಾಗಿದ್ದರೆ, ಆಸ್ತಿಕ ತನ್ನ ಎ೦ದಿನ ಮುಗುಳ್ನಗೆಯೊ೦ದಿಗೆ, ಭಗವ೦ತನನ್ನು ನೆನಸಿ ಅವನಿಗೆ ಕೃತಜ್ಞತೆ ಸಲ್ಲಿಸುವಲ್ಲಿ ಅವನ ಮನಸ್ಸು ಮುಳುಗಿತ್ತು. ಅದ ಕ೦ಡ ನಾಸ್ತಿಕನ ಪ್ರತಿಕ್ರಿಯೆ, ಸಿಟ್ಟಿನೊ೦ದಿಗೆ ಹೀಗಿತ್ತು..

"ಎಲ್ಲಯ್ಯಾ ನಿನ್ನ ಭಗವ೦ತ? ಎಲ್ಲಿ ಬ೦ದ? ನಮ್ಮ ಕಷ್ಟದ ಪ್ರತಿಫಲ, ದೂರದಲ್ಲಿದ್ದ ಹಡಗು ಹತ್ತಿರ ಬ೦ದು, ನಮ್ಮನ್ನು ಕರೆದೊಯ್ಯುವ೦ತಾಯಿತು. ಸಹಾಯಕ್ಕೆ ನಿನ್ನ ಭಗವ೦ತ ಬರಲೂ ಇಲ್ಲಾ, ಅವನ ಸಹಾಯವೂ ಬರಲಿಲ್ಲ. ಸುಮ್ಮನೆ ಎಲ್ಲಾ ಬೊಗಳೆ!"

     ಆಸ್ತಿಕ ಮತ್ತೊ೦ದು ಮುಗುಳ್ನಗೆಯೊ೦ದಿಗೆ, ಹಡಗನ್ನೇರಿದರೆ, ನಾಸ್ತಿಕನಿಗೆ ಮತ್ತೆ ಚಿ೦ತೆ ಒಕ್ಕರಿಸಿತ್ತು. "ಹಡಗೇನೋ ಸಿಕ್ಕಿತು, ಆದರೆ, ನಾನೀಗ ಎಲ್ಲಿದ್ದೇನೆ? ಹೆ೦ಡ್ತಿ ಮಕ್ಕಳನ್ನು ಯಾವತ್ತು ನಾನು ನೋಡೋದು?"

     ಸ್ನೇಹಿತರೇ,  ಸಹಜ ಅ೦ತೀರೇನು..? ಚಿ೦ತೆ ಎ೦ದೂ ಬಿಡದು. ಆದರೆ ಆಸ್ತಿಕ ಸ೦ತೋಷದಿ೦ದ ಭಜನೆ ಮಾಡುತಿದ್ದ. ನಾಸ್ತಿಕನಿಗೆ ಹೇಳುತಿದ್ದಾನೆ.." ಇಷ್ಡು ವ್ಯವಸ್ಥೆ ಮಾಡಿದ ಭಗವ೦ತ, ಅದರದ್ದೂ ಎನಾದರೂ ವ್ಯವಸ್ಥೆ ಮಾಡಿರುತ್ತಾನೆ. ಚಿ೦ತ್ಯಾಕೆ ಮಾಡುತ್ತಿ.. ಚಿನ್ಮಯನಿದ್ದಾನೆ."

     ಗೆಳೆಯರೆ, ಕತೆ ಇಲ್ಲಿಗೆ ಮುಗಿಸುತ್ತಿದ್ದೇನೆ. ನನ್ನ ಸ್ನೇಹಿತನಿಗೆ ಇಷ್ಟು ಹೇಳಿ, ಕೆಲವೊ೦ದು ಪ್ರಶ್ನೆಗಳನ್ನ ಅವನ ಮು೦ದಿಟ್ಟೆ. ಅದನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ. ನಿಮಗೇನನ್ನಿಸುತ್ತದೆ ತಿಳಿಸಿ. ಪ್ರಶ್ನೆಗಳು, ನನ್ನ ಮನಸ್ಸಿನಾಳದ ಆಲೋಚನೆಗಳು ಇ೦ತಿವೆ..

     ಮೊದಲನೆಯದಾಗಿ, ನಾನು ಗಮನಿಸಿದ೦ತೆ, ನೀವೂ ಗಮನಿಸಿರಬಹುದಾದ೦ತೆ, ಇವರಿಬ್ಬರ ಮಧ್ಯೆ, ಇವರಿಬ್ಬರಿಗೂ ಸಹಾಯ ಮಾಡಲು, ಎಲ್ಲೂ ಭಗವ೦ತ ನೇರವಾಗಿ ಬರಲಿಲ್ಲ, ಸುತ್ತಿ ಬಳಸಿ ಕೂಡ ಇಲ್ಲ. ಕಥೆಯ ಕೊನೆಗೆ ಒ೦ದು ಹಡಗು ಬ೦ತು, ಇವರನ್ನು ಕರೆದೊಯ್ಯಿತು ಅನ್ನೋದು ಬಿಟ್ಟು. ಹಾಗಾದರೆ, ದೇವರು ನಿಜವಾಗಲೂ ಇದ್ದಾನಾ? ಅವ ಅಲ್ಲಿಗೆ ಬ೦ದಿದ್ದನಾ? ಅವನು ನಿಜವಾಗಲೂ ಭಗವ೦ತನನ್ನು ನ೦ಬಿದ ಆ ಆಸ್ತಿಕನಿಗೆ ಸಹಾಯ ಮಾಡಿದನಾ?

     ಗೆಳೆಯರೇ, ಉತ್ತರ ಒಬ್ಬೊಬ್ಬರದು ಒನ್ನೊ೦ದು ಇರಬಹುದು. ನನಗ೦ತೂ ಪೂರಾ "Confusion State". ಆದರೆ ಆ ಯೋಚನೆ ಮು೦ದುವರಿಸಿ, ನಾನು ಇನ್ನೊ೦ದೆರಡು ಪ್ರಶ್ನೆಗಳನ್ನು ನನ್ನ ಸ್ನೇಹಿತನ ಮು೦ದಿಟ್ಟೆ.

     ನಾವು ಬದುಕುತ್ತಿರುವುದು, ದುಡಿಯುತ್ತಿರುವುದು, ಇಷ್ಟೆಲ್ಲಾ ಕಷ್ಟ ಪಡುತ್ತಿರುವುದು ಏನಕ್ಕಾಗಿ? ನೆಮ್ಮದಿಯಿ೦ದ, ಸ೦ತೋಷದಿ೦ದ ಬದುಕುವುದಕ್ಕೆ ಅನ್ನೋದು ನನ್ನ ಯೋಚನೆ. ನಮ್ಮ ಬದುಕಿನಲ್ಲಿ ನಾವೇನೆ ಸಾಧಿಸಬೇಕೆ೦ಬ ಛಲ, ಹ೦ಬಲ ಎಲ್ಲಾ ಇದ್ದರೂ, ಅದು ಅ೦ತಿಮವಾಗಿ, ನೆಮ್ಮದಿಯಿ೦ದ, ಶಾ೦ತಿಯಿ೦ದ ಕೂಡಿರಲೇಬೇಕೆ೦ಬ ಯೋಚನೆ ಎಲ್ಲರದ್ದೂ ಅನ್ನೋದು ನನ್ನ ನಿಲುವು.

     ಹಾಗಾದರೆ, ದೇವರು ಇದ್ದಾನೋ, ಇಲ್ಲವೋ ನನಗ೦ತೂ ತಿಳಿಯಲಿಲ್ಲ.. ಇಡೀ ಕತೆಯಲ್ಲಿ ಅವನು, ನೇರವಾಗಿ ಅಥವಾ ಸುತ್ತಿ ಬಳಸಿಯೋ ಸಹಾಯ ಮಾಡಿದ್ದು, ನಾಸ್ತಿಕನ ದೃಷ್ಟಿಯ೦ತೆ ನೋಡಿದರೆ, ಕಾಣೋದಿಲ್ಲ. ಆಸ್ತಿಕ ಹಾಗೂ ನಾಸ್ತಿಕನ ಪರಿಸ್ಥಿತಿ ಒ೦ದೇ ರೀತಿಯಲ್ಲಿದ್ದರೂ, ಅನುಭವಿಸಿದ ಕಷ್ಟಗಳು ಒ೦ದೇ ರೀತಿಯಲ್ಲಿದ್ದರೂ, ಅವರಿಬ್ಬರೂ ಆದ ಘಟನೆಗೆ ಸ್ಪ೦ದಿಸಿದ ರೀತಿ, ಅನುಭವಿಸಿದ ಭಾವನೆಗಳು ಪೂರ್ಣ ಭಿನ್ನ. ಅದು ಈಗಾಗಲೇ ನನ್ನ, ನಿಮ್ಮೆಲ್ಲರ ಗಮನಕ್ಕೆ ಬ೦ದಿರೋ ವಿಷಯ.

 

ಈಗ ಹೇಳಿ ಮಿತ್ರರೇ,

     ದೇವರಿಲ್ಲ ಅ೦ದುಕೊ೦ಡೇ ಬ೦ದ ನಾಸ್ತಿಕನ ತಳಮಳದ ಜೀವನ ಬೇಕೋ ಅಥವಾ ದೇವರಿದ್ದಾನೆ ಅ೦ದುಕೊ೦ಡು ಬದುಕಿದ ಆಸ್ತಿಕನ ನಿರಾಳ, ನಿಶ್ಚಿ೦ತ ಜೀವನ ಲೇಸೆ?

     ನಿಮ್ಮ ಅಭಿಪ್ರಾಯಕ್ಕೆ ಕಾದಿದ್ದೇನೆ.. ಕೆಳಗೆ ನಿಮಗಾಗಿದೆ.. ವಿಶೇಷ ಜಾಗ.. ನಿಮ್ಮ ಉತ್ತರಕ್ಕಾಗಿ.. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಹ೦ಚಿಕೊಳ್ಳಿ..

 

 

ನಿಮ್ಮೊಲವಿನ..

ಸತ್ಯ.

ಹಾ.. ಸ್ನೇಹಿತರೇ..

ಇದೊಂತರ ವಿಚಿತ್ರ "ವಿಷಯ" ಚರ್ಚೆಗೋಸ್ಕರ ಆದ್ರೆ.. ಅಂತ ಅನಿಸುತ್ತದೆ ನನ್ನ ಮನಸ್ಸಿಗೆ.. ಪ್ರಪಂಚದ ಬುಧ್ಧಿವಂತರೆಲ್ಲಾ ಒಂದು ತರಹದ ಉತ್ತರ ನೀಡಿದರೆ ಹೃದಯವಂತರೆಲ್ಲಾ ಇನ್ನೊಂದು ತರಹ ಮಾತಾಡುತ್ತಾರೆ ಈ ವಿಷಯದಲ್ಲಿ. (ಹ..ಹಾ.. ನಾನು ಯಾವ ಗುಂಪಿಗೆ ಸೇರುತ್ತೇನೋ ಗೊತ್ತಿಲ್ಲ...) ಆದರೆ, ನನ್ನ ಮನಸ್ಸಿನಲ್ಲಿರೋ, ಮನಸ್ಸಿಗೆ ಹಿಂದೆ ಬಂದಿದ್ದ ಯೋಚನೆಗಳೆಲ್ಲ ಒಂದೆಡೆ ಹಾಕಿ, ಅದರ ಸಾರ ತೆಗೆಯೋ ಪ್ರಯತ್ನ ಇದು ಅನ್ಕೋತೀನಿ.. ಹಾ.. ಮುಂದಿನ ದಿನಗಳಲ್ಲಿ ನನ್ನ ವಿಚಾರಧಾರೆ ಯಾವ ದಿಕ್ಕಿನಲ್ಲಿ ಹರಿಯುತ್ತೋ ಗೊತ್ತಿಲ್ಲ.. ಸದ್ಯದ್ದು ಏನಿದೆಯೋ ಅದನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ..

 

ನಾವುಗಳು ಸಣ್ಣವರಿದ್ದಾಗ, ಅಂದರೆ ತುಂಬ ಸಣ್ಣವರಿದ್ದಾಗ.. ಸುಮಾರು ಹತ್ತು ವರ್ಷ ಆಗೋವರೆವಿಗೂ ನಮ್ಮಪ್ಪ ನಮಗೆ "ಮಹಾನ್ ವ್ಯಕ್ತಿ". ಅಲ್ಲಿ ಅರ್ಥ ಮಾಡಿಕೊಂಡಿದ್ವಾ ಅನ್ನೋ ಪ್ರಶ್ನೆ ಇಲ್ಲ.. ನಮ್ಮಪ್ಪನ ಕೈಯಲ್ಲಿ ಎಲ್ಲ ಸಾಧ್ಯ... ಬಹುಷಃ ಆಮೇಲೆ ಆ ಭಾವನೆ ಕಡಿಮೆಯಾಗುತ್ತಾ ಹೋಗುತ್ತೇನೋ? ಅಲ್ಲಿವರೆವಿಗೂ ಅಪ್ಪ ಮಾಡೋದೆಲ್ಲಾ, ಯಾವತ್ತೂ ಸರಿ ಇರುತ್ತೆ ಅಂದುಕೊಂಡಿದ್ದ ಮನಸ್ಸು, ಸ್ವಲ್ಪ ಉಲ್ಟಾ ಯೋಚನೆ ಮಾಡೋಕ್ಕೆ ಶುರು ಮಾಡುತ್ತಾ ಅಂತಾ.. ಅಪ್ಪನ ಎಲ್ಲಾ ತೀರ್ಮಾನಗಳು ಸರಿ ಅನ್ನಿಸೋದಿಲ್ಲ.. ಸ್ವಲ್ಪ ತಪ್ಪಿರಬೇಕು ಅನ್ನಿಸೋಕ್ಕೆ ಶುರುವಾಗಿರುತ್ತೆ.. ಅಂದರೆ ಮನಸ್ಸಿನಲ್ಲಿ ವಿರುದ್ಧವಾದ ಯೋಚನೆ ಶುರುವಾಗಿರುತ್ತೆ. ಹಾ.. ಮಿತ್ರರೇ.. ಸ್ವಲ್ಪ ಬುದ್ಧಿ ಅಂದರೆ "ಸ್ವಂತ ಬುದ್ಧಿ" ಅಂತಾರಲ್ಲ ಅದು, ಅದು ಬರೋದಿಕ್ಕೆ ಶುರುವಾಗಿರುತ್ತೆ..

 

ಗೆಳೆಯರೇ.. ಹೆಚ್ಚು ಇದು, ವಿಚಿತ್ರ ವೇಗದಲ್ಲಿ ಬೆಳೆಯೋಕ್ಕೆ ಶುರು ಮಾಡುತ್ತದೆ. ಅಂದರೆ ಪ್ರಾರಂಭದಲ್ಲಿ ಒಂದು ವೇಗ ತೋರಿಸದರೆ, ಆಮೇಲೆ ಒಂದೊಂದು ಸಾರಿ ಪೂರಾ ನಿಂತು ಹೋಯಿತೇನೋ ಅಂತನ್ನಿಸುತ್ತದೆ ಆದರೆ ಯೋಚಿಸೋ ಅವಶ್ಯಕತೆ ಇಲ್ಲ. ಅದು ನಿಲ್ಲೋ ವೇಗ ಅಲ್ಲ.. "ಮ್ಯೂಸಿಕ್ ಪ್ಲೇಯರ್" ನ "ಪಾಜ್ಹ್" ಬಟನ್ ಇದ್ದ ಹಾಗೆ ಸ್ವಲ್ಪ ಕಾಲ ನಿಂತು ಮತ್ತೆ ಮುಂದುವರೆದಿರುತ್ತೆ.

 

ಹಾಗಾದ್ರೆ, ಇದರ ಪರಿಣಾಮಗಳೇನು ಅಂದರೆ....ಅಪ್ಪ ಯೋಚನೆ ಮಾಡೋದು..ಮಾಡ್ತಾ ಇರೋದು.. ಎಷ್ಟೊಂದು ಸಾಮಾನ್ಯ ("ಸಿಲ್ಲಿ" ಅಂತಾರಲ್ಲ ಇಂಗ್ಲೀಷ್ನಲ್ಲಿ) ಅನ್ನಿಸೋಕ್ಕೆ ಶುರುವಾಗುತ್ತೆ, ಅವರ ತೀರ್ಮಾನಗಳು ಈ ಕಾಲಕ್ಕಲ್ಲ, "ನಮ್ಮ ಭಾವನೆಗಳು ಅರ್ಥ ಮಾಡ್ಕೊಳ್ಳಕ್ಕೆ ಇವರಿಗೆ ಸಾಧ್ಯ ಇಲ್ಲ" ಅನ್ನಿಸೋಕೆ ಶುರುವಾಗಿರುತ್ತೆ. "ಇವರ ಯೋಚನೆಗಳೆಲ್ಲ, ಗೊಡ್ಡು ಸಂಪ್ರದಾಯಗಳೆಲ್ಲ ಈ ಕಾಲಕ್ಕೆ ಹೊರತಾದವು" ಅಂತ ಅನ್ನಿಸೋಕ್ಕೆ ಶುರುವಾಗಿರುತ್ತದೆ. ಇದು ಎಲ್ಲೀವರೆವಿಗೂ ಬೆಳೆಯುತ್ತೆ ಅಂದರೆ ಸ್ನೇಹಿತರೇ, "ಈ ಅಪ್ಪನಿಗೆ ಬುದ್ಧಿನೇ ಇಲ್ಲ" ಅಂತ ಅನ್ನಿಸೋಕ್ಕೆ ಶುರುವಾಗಿ ಬಿಡುತ್ತೆ. "ಭಯಂಕರ ದಡ್ಡತನ ತೋರಿಸುತ್ತಿದ್ದಾರೆ ಇತ್ತೀಚಿಗೆ ಇವರು" ಅಂತ ಅನ್ನಿಸೋಕ್ಕೆ ಶುರುವಾಗಿರುತ್ತೆ. ಹಾ.. ಅದೇ ಸಮಯಕ್ಕೆ ಅಪ್ಪನಿಗಿಂತ ಇನ್ನೂ ಚಿಕ್ಕವರಿರುವ "ಚಿಕ್ಕಪ್ಪ"ನೋ ಅಥವಾ ಪಕ್ಕದ್ಮನೆ "ಅಂಕಲ್" ಉತ್ತಮ ಅನ್ನಿಸೋಕ್ಕೆ ಶುರುವಾಗಿರುತ್ತೆ. ಅವರಿಗೆ ನಮ್ಮ ಮೇಲೆ ನಿಜವಾದ ಪ್ರೀತಿ ಇದೆ ಅನ್ನಿಸುತ್ತಿರುತ್ತದೆ. ಅಪ್ಪನಿಗೆ ನಮ್ಮ ಮೇಲೆ ಪ್ರೀತಿಗಿಂತ ಜಾಸ್ತಿ ಇರೋದು ಸಿಟ್ಟು ಅಂತ ಅನ್ನಿಸುತ್ತಿರುತ್ತದೆ.

 

ಮಿತ್ರರೇ, ಹೆಚ್ಚು ಕಡಿಮೆ 20 -21ರ ವಯಸ್ಸಿಗೆ ಬರುವಷ್ಟರಲ್ಲಿ ನಮ್ಮ ಮನಸ್ಸು, ನಮ್ಮ ಅಪ್ಪನನ್ನು " ಇವರು ಹಳೆ ಕಾಲದವರು, ಗೊಡ್ಡು ಸಂಪ್ರದಾಯದವರು, ಇವರದ್ದು ಎಲ್ಲಾ ಹಳೇ ಕಾಲದ ಅನಗತ್ಯ ಶಿಸ್ತುಗಳು, ಕಟ್ಟುನಿಟ್ಟುಗಳು, ಕಸಿವಿಸಿ ಮಾಡುವ, ಹೊಂದಾಣಿಕೆಯಾಗದ ವಿಚಾರಧಾರೆಗಳನ್ನು ತುಂಬಿರುವವರು, ಮಕ್ಕಳನ್ನು ಅರ್ಥ ಮಾಡಿಕೊಳ್ಳದಿರುವವರು" ಅನ್ನೋವಲ್ಲಿಗೆ ಬಂದು ನಿಂತಿರುತ್ತದೆ.

 

ಒಲವಿನ ಸ್ನೇಹಿತರೇ, ಇವೆಲ್ಲ ವಿಚಾರಗಳನ್ನೂ ಒಂದು ನಿಮಿಷ ಪಕ್ಕದಲ್ಲಿ, ಹಾ.. ದೂರದಲ್ಲಿ ಅಲ್ಲ, ಪಕ್ಕದಲ್ಲೇ ಇಟ್ಟುಕೊಂಡು, ಇನ್ನೇನು ಸ್ವಲ್ಪ ದಿನಗಳಲ್ಲಿ ನಾವುಗಳು, ಅಂದರೆ ತಂದೇನೋ, ತಾಯಿನೋ ಆಗುತ್ತಿರುವವರು, ಆಗಲೇ ಆಗಿರುವವರು ಅಥವಾ ಇನ್ನೇನು ಸ್ವಲ್ಪ ವರ್ಷಗಳು ಕಳೆದ ನಂತರ ಆಗಲಿರುವ ಸ್ನೇಹಿತರೇ, ಸ್ನೇಹಿತೆಯರೇ, ನನ್ನ ಒಂದೆರಡು ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನೂ ಅಂತ ಯೋಚನೆ ಮಾಡುತ್ತೀರಾ?... ನಿಮ್ಮ ಉತ್ತರಕ್ಕಾಗಿ ಕೆಳಗೆ "ವಿಶೇಷ ಜಾಗ" ಇರಿಸಿದ್ದೇವೆ. ಅವಶ್ಯ ಉತ್ತರಿಸಿ..(ಕಾಮೆಂಟ್ಸ್ ನ ಜಾಗ ನಿಮ್ಮ ಉತ್ತರಕ್ಕಾಗಿ)

 

ಈಗ ನನ್ನ ಪ್ರಶ್ನೆಗಳು.. ಮುಂದೆ ಬರುವ ನಮ್ಮ ಮಕ್ಕಳು, ಅಥವಾ ಈಗಾಗಲೇ ಹುಟ್ಟಿರುವ ನಮ್ಮ ಮಕ್ಕಳು... ನಮಗಿಂತ ಭಿನ್ನವಾಗಿ ಯೋಚನೆ ಮಾಡುತ್ತಾರಾ? ಅಥವಾ ಇದೆ ರೀತಿಯಲ್ಲಿ ಯೋಚನೆ ಮಾಡುತ್ತಾರೋ...? ಹೇಳಿ ಸ್ನೇಹಿತರೇ.. ಹಳೇ ಕಾಲದವರು ಅಂತ ಜರಿತಾ ಇದ್ದೆವಲ್ಲಾ, ಯಾವುದು ಸ್ವಾಮೀ ಹಳೇ ಕಾಲ...? ಅಂದರೇ.. 1990, 1940, 1960, ಅಥವಾ... 2008..ಯಾವುದು ಸ್ವಾಮೀ?

 

ಸಾಮಾನ್ಯ ಜ್ಞಾನ(ಕಾಮನ್ ಸೆನ್ಸ್) ಇಲ್ಲ ಇವರಿಗೆ, ಮಕ್ಕಳ್ಳನ್ನು ಅರ್ಥಮಾಡಿಕೊಳ್ಳಲ್ಲ ಅಂತೆಲ್ಲಾ ಉದ್ದುದ್ದಾ ದೂರು ಕೊಡುತ್ತಿದ್ದೆವೆಲ್ಲಾ, ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತೇವೆ ನಮ್ಮ ಮಕ್ಕಳ್ಳನ್ನು... ಅಂತ ಯಾರು ಎದೆ ತಟ್ಟಿ ವಿಶ್ವಾಸ ಕೊಡೋರಿದ್ದೀರಿ? ಹಾ.. ಹಾಗೆ ಇನ್ನೊಂದು ಮುಖ್ಯವಾದ ಅಂಶ..ಈ ಮಾತಿಗೆ..ಅಂದರೆ, ನೀವು ನಿಜವಾಗಿಯೂ ನಿಮ್ಮ ಮಕ್ಕಳ್ಳನ್ನು ಅರ್ಥ ಮಾಡಿಕೊಂಡಿದ್ದೀರಿ ಅಂತ "ನಿಮ್ಮ ಮಕ್ಕಳು" ಉತ್ತರಿಸಬೇಕು. ಅದೂ ಕೂಡ ನಿಮ್ಮ ಮಕ್ಕಳು 15, 18. 21 ವರ್ಷಗಳಲ್ಲಿದ್ದಾಗ ಕೇಳಿ, ಅವರ ಉತ್ತರ ಸದಾಕಾಲ ಅದೇ ಆಗಿತ್ತು, ನಿಮ್ಮ ಪರವಾಗೇ ಇತ್ತು ಅಂದಲ್ಲಿ ನನಗೆ ದಯವಿಟ್ಟು ತಿಳಿಸಿ.

 

ಇನ್ನೂ, ಅಪ್ಪನಿಗೆ, ಯಾವ ವಿಷಯನೂ ಅರ್ಥನೇ ಆಗೋದಿಲ್ಲ, ಪ್ರೀತಿ ಅಂದರೆ ಏನೂ ಅಂತಾನೆ ಗೊತ್ತೇ ಇಲ್ಲ, ಯುವಕರ, ಯುವತಿಯರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಇವರಿಗೆ ಇಲ್ಲ, ಹಾಗೆ ಇನ್ನೂ ಕೆಲವರ ಪ್ರಕಾರದ, "ದುಡ್ಡಿಗೆ ಬೆಲೆ ಕೊಡುವ, ಪ್ರೀತಿಗೆ ಬೆಲೆ ಕೊಡದಿರುವ ಅಪ್ಪ" ಅನ್ನುವ ಸ್ನೇಹಿತರೇ, ನೀವುಗಳು ಹೀಗೆಲ್ಲ ನಿಮ್ಮಪ್ಪನಂತೆ ಮಾಡೊಲ್ಲ ಮುಂದೆ, ನೀವು, ನಿಮ್ಮ ಮಕ್ಕಳು "ಯೌವನ" ಪ್ರವೇಶಿಸಿದಾಗ ನೀವುಗಳು, ನಿಮ್ಮ ಮಕ್ಕಳನ್ನು ಅದೆಷ್ಟು ಸಹಿಸೋಕೊತಿರಾ ಅಂತ ಯೋಚನೆ ಮಾಡಿದಿರೋ...

 

ಹಾ..ಹಾಗೆ ನಿಮ್ಮುಂದೆ ಇನ್ನೊಂದು ವಿಚಾರ... ಕೆಲವು ಹುಡುಗರು, ಹುಡುಗಿಯರೂ, ಇನ್ನೊಂದು ವಿಚಾರದಲ್ಲಿ ಅವರ ಮನಸ್ಸು ಈ ಕೆಳಗಿನ ರೀತಿಯಂತೆ ಯೋಚನೆ ಮಾಡಿರಬಹುದು. ಅಪ್ಪ ನಿವೃತ್ತಿಯಾಗುವಾಗ ತೆಗೆದುಕೊಳ್ಳುತ್ತಿದ್ದ ಸಂಬಳದ ದುಪ್ಪಟ್ಟು, ಮೂರು, ನಾಲ್ಕು ಪಟ್ಟು.. ಹಾ..ಹಾ.. ನಾನು ಕೆಲಸಕ್ಕೆ ಸೇರುವಾಗೆಲೇ ತೆಗೆದುಕೊಳ್ಳುತ್ತಿದ್ದೇನೆ. ಆದರೆ ಸ್ನೇಹಿತರೇ, ಅದೇ ನಮ್ಮಪ್ಪ ಅದೇ ಎರಡು, ಮೂರು, ಎಂಟೋ, ಒಂಬತ್ತೋ ಸಾವಿರ ತೆಗೆದುಕೊಳ್ಳುತ್ತಿದ್ದಾಗಲೂ, ಇಡೀ ಮನೆ ಸಾಕುತ್ತಾ, ನಮ್ಮಮ್ಮನ ಎಲ್ಲಾ ಆಸೆಗಳನ್ನೂ ತೀರಿಸುತ್ತಾ, ಅವಳು ಕೇಳಿದ ಸೀರೆ ಆಭರಣ ಹೇಗೋ ಕಷ್ಟಪಟ್ಟು ಮಾಡಿಸಿ, ನಾವು ಕೇಳಿದ ಆಟಿಕೆ ಅಥವಾ ಕೇಳಿದ ಇನ್ನೇನನ್ನೋ, "ಹೂಂ" ಅಂತಲೋ, "ಹುಹೂ೦.. ಆಗೋಲ್ಲಾ" ಅಂತೆಲ್ಲ ಹೇಳಿಯೂ ಒಟ್ನಲ್ಲಿ ಕೊನೆಗೆ ಹೇಗೋ ವ್ಯವಸ್ಥೆ ಮಾಡುತ್ತಾ, ನಮ್ಮ ಅಕ್ಕನ, ಅಣ್ಣನ, ತಂಗಿಯ, ತಮ್ಮನ ಆಸೆಗಳೆಲ್ಲನೂ ತಿರಿಸೋ ತನ್ನ ಪೂರ್ಣ ಪ್ರಯತ್ನ ಮಾಡಿದ ಮೇಲೂ, ಅಕ್ಕನ, ತಂಗಿಯ ಮದುವೆ ಅದ್ದೂರಿಯಿಂದಲೇ ಮಾಡಿ, ಸಣ್ಣದೋ, ದೊಡ್ಡದೋ, ತನ್ನದೇ ಆದಂತಹ ಒಂದು "ಸ್ವಂತ ಸೂರು" ಅಂತ ಇರಲಿ ಅಂತ ಕಷ್ಟಪಟ್ಟಿದ್ದು, ಅದೇ ಅಪ್ಪ, ಅದೇ ಜುಜುಬಿ ಸಂಬಳದಿಂದನೇ ಅಲ್ಲವೇ?

 

ಮಿತ್ರರೇ, ನಾವುಗಳೂ ಪ್ರಾರಂಭದಲ್ಲೇ ಇಷ್ಟೊಂದು, ಮೂರ್ನಾಲ್ಕು ಪಟ್ಟು ಸಂಬಳ ತೆಗೆದುಕೊಂಡರೂ ಇದೂವರೆವಿಗೂ ನಾವು ಮಾಡಿದ್ದೇನು? ಸಾಧಿಸಿದ್ದೇನು? ಎಷ್ಟು ಜವಾಬ್ಧಾರಿ ವಹಿಸಿಕೊಳ್ಳಬಲ್ಲೆವು ಇವತ್ತಿಗೆ ನಾವು? ಅರೇ..ನಮ್ಮಲ್ಲಿ ಇನ್ನೂ ಎಷ್ಟೋ ಜನರೂ, ಅಪ್ಪನ ಹತ್ತಿರ ದುಡ್ಡು ಕೇಳೋದನ್ನೇ ಬಿಟ್ಟಿಲ್ಲ ಅಂತೀನಿ..

 

ಈಗ ಹೇಳಿ ಗೆಳೆಯರೇ, ನಮ್ಮಪ್ಪ ಬುದ್ದಿಯಿಲ್ಲದವನಾ? ಸಾಮನ್ಯ ಜ್ಞಾನ(ಕಾಮನ್ ಸೆನ್ಸ್) ಇಲ್ಲದವನಾ? ಮಕ್ಕಳ್ಳನ್ನು ಅರ್ಥ ಮಾಡಿಕೊಳ್ಳಕ್ಕೆ ಆಗದೆ ಇರುವವನಾ? ಪ್ರೀತಿ ಅಂದರೆ ಗೊತ್ತಿಲ್ಲದವನಾ? ಮಿತ್ರರೇ.. ಇನ್ನೂ ಅಪ್ಪನ ದೂರುತ್ತಿರುವವರು ಯಾರಾದ್ರೂ ನಮ್ಮಲ್ಲಿ ಇದ್ದಾರ? ಹಾಗಾದರೆ ನಿಮ್ಮ ಮಕ್ಕಳು ನಿಮ್ಮನ್ನು ದೂರದಂತೆ ನೀವು ಯಾವ ಬದಲಾವಣೆ ತಂದುಕೊಂಡಿದ್ದೀರ?

 

ಹೇಳಿ... ನೀವು ನಿಮ್ಮ ಮಕ್ಕಳ ಜೊತೆ ಬಿನ್ನಾಭಿಪ್ರಾಯ ಬರದಂತೆ ಯಾವ ರೀತಿಯಲ್ಲಿ, ಎಷ್ಟರ ಮಟ್ಟಿಗೆ ನೀವು ತಯಾರಾಗಿದ್ದಿರಾ? ನಿಮ್ಮಪ್ಪನ ಬಗ್ಗೆ ಅಷ್ಟೊಂದೆಲ್ಲ ಯೋಚನೆ ಮಾಡಿದ್ದ ನೀವು, ನಿಮ್ಮನ್ನು ಆ ಜಾಗದಲ್ಲಿ ಎಷ್ಟು ಬಾರಿ ಇಟ್ಟುಕೊಂಡು ಯೋಚನೆ ಮಾಡಿದ್ದೀರಿ? ಇಲ್ಲಿ.. ಹಾ.. ಈ ಜಾಗದಲ್ಲಿ ನಮ್ಮ ಅಪ್ಪ ತಪ್ಪು ಮಾಡಿದ್ದು ಅಂತೆಲ್ಲಾ ಹೇಳುತ್ತಿದ್ದಲ್ಲೆಲ್ಲಾ ನಿಮ್ಮನೂ ಇಟ್ಟು.. ಹಾ.. ಈಗ ಯೋಚನೆ ಮಾಡಿ.. ನೀವು ಎಷ್ಟರ ಮಟ್ಟಿಗೆ ತಯಾರಾಗಿದ್ದೀರ? ಯೋಚಿಸಿ.. ನನಗೂ ತಿಳಿಸಿ

 

ಸ್ನೇಹಿತರೇ.. ನಮ್ಮಪ್ಪನ ಕಣ್ಣಲ್ಲಿ ಕಣ್ಣು ಇಟ್ಟು ಅವರನ್ನು ನೇರವಾಗಿ ನೋಡಿಕೊಂಡು, ನೀನು ಬಹಳ ತಪ್ಪು ಮಾಡಿದೆ ಅಂತ, ಅಥವಾ, ನೀನು ಮಾಡಿದೆಲ್ಲಾ ತಪ್ಪು ಅಂತ ಹೇಳುವ ಧೈರ್ಯ ಇನ್ನೂ ಯಾರಿಗಾದರು ಉಳಿದಿದೆಯಾ ಸ್ನೇಹಿತರೇ?.. ನನಗಂತೂ ಹಾಗೆ ಅನ್ನಿಸುತ್ತಿಲ್ಲಾ.. ಅವರ ಕಣ್ಣಿನಂಚಿನಲ್ಲಿರೋ ಕಣ್ಣೀರು ಅವರು ನಮಗಾಗಿ ಪಟ್ಟಿರೋ ಆ ಕಷ್ಟದ ಪೂರ್ಣ ಕತೆಯನ್ನು ಹೊತ್ತಿದೆ. ಅದು ಹೊರಹರಿದರೆ ನಾವುಗಳು ಕೊಚ್ಚಿಹೋಗಬೇಕು, ಅವರಿಡೋ ನಿಟ್ಟುಸಿರು ನಮ್ಮನ್ನು ಬಿರುಗಾಳಿಯಂತೆ ಇನ್ನೆಲ್ಲೋ ಕೊಂಡಯ್ಯಬೇಕು... ಆದರೆ.. ನಾವಿದೆನ್ನೆಲ್ಲ ಗಮನಿಸುತ್ತಿದ್ದೇವಾ? ಅಥವಾ ಮರತೇಬಿಟ್ಟಿದ್ದಿವಾ?

 

ಸ್ನೇಹಿತರೇ... ಇಂದಿಗೆ, ನಾನು ಈ ಭೂಮಿಗೆ ಬಂದು 27 ವರ್ಷ ಆದ ಮೇಲೂ, ನಾನು ನಮಪ್ಪನಿಗೆ ಮಾಡಿದ್ದೇನು..? ಕೊಟ್ಟದ್ದೇನು..? ಅಂತನ್ನೋ ಯೋಚನೆಗೆ ಉತ್ತರಿಸಲಾರದೆ..

...........ಅವರ ಕೃಪಚರಣಾರವಿಂದಗಳಲ್ಲಿ ನನ್ನ ಈ ಲೇಖನವನ್ನ ಅರ್ಪಿಸುತ್ತಿದ್ದೇನೆ. ಇದು ನನ್ನ ೨೮ನೇ ವರ್ಷದ ನಾಂದಿಯ ಅರ್ಪಣೆ ನನ್ನಿಂದ, ನನ್ನ ಪೂಜ್ಯ ತಂದೆಯವರಿಗೆ ಹಾಗೂ ನನ್ನ ತಾಯಿಗೂ ಕೂಡ..

ನಿಮ್ಮೆಲ್ಲರ ಒಲವು, ಪ್ರೀತಿ, ಸಹಾಯ, ಬೆಂಬಲ, ನನಗೆ ಸದಾ ಅವಶ್ಯಕತೆ ಇದ್ದೆ ಇದೆ.. ಹಾಗು ಅದು ಇರುತ್ತದೆ ಅನ್ನೋ ನಂಬಿಕೆ ಇದೆ.. ಅದರೂ ಕೇಳೋದು ನನ್ನ ಕರ್ತವ್ಯ ಅನ್ಕೊಂಡು ಮತ್ತೆ ನಿಮ್ಮ ಬೆಂಬಲ ಕೇಳ್ತಾ.. ನಿಮ್ಮ ಅನಿಸಿಕೆಯನ್ನ.. ಇಲ್ಲಿ ಕೆಳಗೆ.. ದಯವಿಟ್ಟು ನೀಡಿ ಅಂತಾ ಹೇಳುತ್ತಾ..

 

ನಮಸ್ಕಾರಗಳು..

ನಿಮ್ಮೊಲವಿನ...

ಸತ್ಯ.

ಮಿತ್ರರೇ,


ಈ "ಸತ್ಯ", ಮ್ಮೊಂದಿಗಿರುವ "ಮ್ಮದೇ ಆದ ಸತ್ಯ".


ಹಾ.. ಈ "ಬ್ಲಾಗ್", ನನ್ನ, ನಿಮ್ಮ, ಎಲ್ಲರ ಮನಸ್ಸಿನಾಳದ "ನಿಜ"ಗಳಿಗೆ, ಆ "ಸತ್ಯ"ಕ್ಕೆ ವೇದಿಕೆಯಾಗಲಿ ಅನ್ನೋದು ನನ್ನಾಸೆ..

ಸತ್ಯನ ಒಂದು ಇಷ್ಟವಾದ ವಿಷಯ "ಮನಶ್ಶಾಸ್ತ್ರ"(Psychology).
ಹಾಂ.. ಹಾಗಂತ ಕಾಲೇಜಿನಲ್ಲಿ ಹೇಳಿಕೊಡೋ ಮನಶ್ಶಾಸ್ತ್ರನ ಇದರೊಂದಿಗೆ ಹೊಲಿಸೋ ಪ್ರಯತ್ನ ಬೇಡ.. ಅದು ಶಾಸ್ತ್ರೀಯ ವಿಷಯ, ನನ್ನದೋ ನನ್ನದೇ ಆದ, ನನ್ನ ಮಟ್ಟಿಗಿನ ಜ್ಞಾನ.. ಇಲ್ಲಿನ ಲೇಖನಗಳಲ್ಲಿನ ಮುಖ್ಯ ತಿರುಳು, ಲೇಖನದ ಪ್ರಾಮುಖ್ಯತೆ, ಮನಸ್ಸಿಗೆ, ಮನಸ್ಸಿನ ಭಾವನೆಗೆ ಸಂಬಧಿಸಿರುತ್ತದೆ ಎಂಬೋದನ್ನ ಈ ಮೂಲಕ ತಮ್ಮ ಮುಂದಿಡಬಯಸುತ್ತೇನೆ. ಇಲ್ಲಿನ ಲೇಖನಗಳನ್ನು ಸದ್ಯಕ್ಕೆ ಬರೆಯುವವನು ನಾನೊಬ್ಬನೇ ಆದರೂ, ಅದರ ಮುಂದುವರಿಕೆಗೆ ಅತ್ಯವಶ್ಯವಾಗಿ ಬೇಕಾದ "ಅನಿಸಿಕೆ" Comments ಗಳಿಗೆ ನಾನು ನಿಮ್ಮನ್ನುಬಹುವಾಗಿ ನೆಚ್ಚಿಕೊಂಡಿದ್ದೇನೆ..


ನೀವು ಈ ಲೇಖನಗಳನ್ನೂ ಓದಿದಾಗ ನಿಮಗನಿಸಿದ್ದನ್ನು.. ನಿಮಗಾದ ಯಾವುದೋ ನೆನಪನ್ನು.. ಅಥವಾ ಇನ್ನೇನೋ ಇಲ್ಲಿ ಹಂಚಿಕೊಳ್ಳಬೇಕೆನಿಸಿದ್ದನ್ನು ದಯವಿಟ್ಟು ಇಲ್ಲಿ ನೀಡಿ..(ಅದಕ್ಕೆ ಕಣ್ಣಿಗೆ ಕಾಣದ ನನ್ನ ಯಾವುದೋ ಒಂದು ಒತ್ತಡ ಇದೆ ಅಂದುಕೊಳ್ಳಿ.....ಹ..ಹಾ.. )

ಈ ಎಲ್ಲಾ ಲೇಖನಗಳನ್ನೂ ನನ್ನ ನಲ್ಮೆಯ ಅಪ್ಪ, ಅಮ್ಮನಿಗೆ ಮೊದಲು ಅರ್ಪಿಸಿ, ನಂತರ ಈ ಜಗದ ಪದತಲದಲ್ಲಿ ಇಡುತ್ತಿದ್ದೇನೆ
... ಹಾಗೆ ನಿಮ್ಮ ಅನಿಸಿಕೆ ಹಾಗು ಉತ್ತರಕ್ಕೆ ಕಾಯಿತ್ತಿರುವ..

ತಮ್ಮವ
....ಸತ್ಯ ಪ್ರಿಯ.


[ಈ ಎಲ್ಲಾ ಲೇಖನಗಳನ್ನು ನಾನು ಕನ್ನಡದಲ್ಲಿ ಬರೆದರೂ, ಅದನ್ನು ನನ್ನ ಇತರ ಸ್ನೇಹಿತರಿಗಾಗಿ.. ಇತರೇ ಭಾಷೆಗಳಲ್ಲಿ ಮುಖ್ಯವಾಗಿ, "English" ಹಾಗೂ " ಹಿಂದಿ"ಯಲ್ಲಿ ತರಬೇಕು ಎಂಬೊಂದು ಆಸೆ. ಹಾಗೆ   ತಾವಾಗಿಯೇ ಯಾರಾದರೂ ಸಹಾಯ ಮಾಡಲು ಇಚ್ಛೆ ಪಟ್ಟಲ್ಲಿ, ಬೇರೆ ಭಾಷೆಗೂ ತರಲು ನಾನು ಸಿದ್ದ, ಹಾಗೂ ಸಹಾಯ ಮಾಡುವವರಿಗೆ ಚಿರಋಣಿಯಾಗಿರುತ್ತೇನೆ.. ಸಹಾಯ ಮಾಡಲು ಸಿದ್ದರಿರುವಲ್ಲಿ ವಿನಮ್ರತೆಯಲ್ಲಿ ಈ ಸತ್ಯ ಕಾದಿರುವನು.]